	ಬೃಹದ್ಗಾತ್ರ ಉತ್ಪಾದನೆ	
	
ಆಧುನಿಕ ಯಂತ್ರೋಪಕರಣಗಳ, ನುರಿತ ನೌಕರರ ಮತ್ತು ಇತರ ಉತ್ಪಾದನಾ ಸಾಮಗ್ರಿಗಳ ಹೆಚ್ಚು ಬಳಕೆಯಿಂದ ಹೆಚ್ಚು ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆ (ಮಾಸ್ ಪ್ರೊಡಕ್ಷನ್; ಲಾರ್ಜ್‍ಸ್ಕೇಲ್ ಪ್ರೊಡಕ್ಷನ್). ಅನುಭೋಗಿ ಹಾಗೂ ಉತ್ಪಾದಕ ವಸ್ತುಗಳ ಬೃಹದ್ಗಾತ್ರದ ಉತ್ಪಾದನೆ ಕಳೆದ ಶತಮಾನದ ಕೈಗಾರಿಕಾ ಕ್ಷೇತ್ರದಲ್ಲಿಯ ಒಂದು ಮುಖ್ಯ ಬೆಳೆವಣಿಗೆ. ಉತ್ಪಾದನಾ ಕ್ಷೇತ್ರದಲ್ಲಿ ಮಿತ ಹೊಣೆಗಾರಿಕೆ ವ್ಯವಸ್ಥೆ ಜಾರಿಗೆ ಬಂದ ಮೇಲೆ, ಅನೇಕ ಜನರಿಂದ ಬಂಡವಾಳ ಸಂಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಕೂಡು ಬಂಡವಾಳ ಸಂಸ್ಥೆಗಳಲ್ಲಿ ಅನೇಕರು ಬಂಡವಾಳ ಹೂಡುತ್ತಾರೆ. ಕೋಟ್ಯಂತರ ರೂಪಾಯಿಗಳ ಬಂಡವಾಳದಿಂದ ದೊಡ್ಡ ಉದ್ಯಮಗಳನ್ನು ಸ್ಥಾಪಿಸಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ. 

	ದೊಡ್ಡ ಪ್ರಮಾಣದ ಉತ್ಪಾದನೆಯನ್ನು ನಡೆಸುವ ಕೈಗಾರಿಕೆಗಳಿಗೆ ಅನೇಕ ಅನುಕೂಲಗಳಿವೆ. ಉತ್ಪಾದನೆಯಲ್ಲಿ ವಿಶೇಷ ತಜ್ನರ ನೇಮಕ. ಸಾಗಣೆದರದಲ್ಲಿ ರಿಯಾಯಿತಿ. ಅಗ್ಗದ ದರದಲ್ಲಿ ಕಚ್ಚಾ ಮಾಲುಗಳನ್ನು ಕೊಳ್ಳುವುದು ವೈಜ್ಝಾನಿಕ ಪ್ರಯೋಗ ಶಾಲೆಗಳನ್ನು ಹೊಂದಿರುವುದು, ಸಂಭವಿಸಬಹುದಾದ ನಷ್ಟಗಳನ್ನು ಎದುರಿಸುವ ಶಕ್ತಿ, ಶ್ರಮವಿಭಜನೆ, ಮಾರುಕಟ್ಟೆಯನ್ನು ಸರಿಯಾಗಿ ಸಮೀಕ್ಷಿಸಿ ಗಿರಾಕಿಗಳ ಅಭಿರುಚಿಗೆ ತಕ್ಕಂತೆ ಉತ್ಪಾದಿಸುವ ಸೌಲಭ್ಯ-ಇವು ಮುಖ್ಯ ಪ್ರಯೋಜನಗಳು. ಅಧಿಕ ಉತ್ಪಾದನೆಯಿಂದಾಗಿ ಏಕಸ್ವಾಮ್ಯ ಲಾಭವಾಗುವುದೂ ಉಂಟು. ಬೃಹತ್ ಪ್ರಮಾಣದ ಉತ್ಪಾದನೆಯಲ್ಲಿ ಅದಕ್ಕೆ ಸಂಬಂಧಿಸಿದ ನಾನಾ ರೀತಿಯ ಉಪವಸ್ತುಗಳನ್ನೂ ಉತ್ಪಾದಿಸುವುದು ಸಾಧ್ಯವಾಗಬಹುದು. ಇದರಿಂದ ಉತ್ಪಾದಿಸುವ ಒಂದು ವಸ್ತುವಿಗೆ ಬೇಡಿಕೆ ಕಡಿಮೆಯಾದರೂ ಮತ್ತೊಂದು ವಸ್ತುವಿನ ಬೇಡಿಕೆಯಿಂದಾಗಿ ಉತ್ಪಾದನೆಯನ್ನು ಮುಂದುವರಿಸಿಕೊಂಡು ಹೋಗುವುದು ಸಾಧ್ಯ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಬೃಹತ್ ಪ್ರಮಾಣದ ಉತ್ಪಾದನೆಯಿಂದ ಅಲ್ಲಿಯ ಜನರ ಜೀವನ ಮಟ್ಟ ಉತ್ತಮವಾಗಿರುವುದು. ಸಾಧಾರಣ ಅನುಭೋಗಿ ವಸ್ತುಗಳು ಆ ರಾಷ್ಟ್ರ ಗಳಲ್ಲಿ ಬೃಹತ್ಪ್ರಮಾಣದಲ್ಲಿ ಉತ್ಪಾದನೆ ಯಾಗುವುದರಿಂದ ಅವು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಎಟುಕುವುವು. 

	ಬೃಹತ್ಪ್ರಮಾಣದ ಉತ್ಪಾದನೆಯಲ್ಲಿ ಅನೇಕ ನ್ಯೂನತೆಗಳೂ ಉಂಟು. ಕೈಗಾರಿಕೆ ದೊಡ್ಡದಾದಷ್ಟೂ ಆಡಳಿತ ಯಂತ್ರದ ಜಟಿಲತೆಗಳೂ ಹೆಚ್ಚು. ಉತ್ಪಾದನೆಗೆ ಸಂಬಂಭಿಸಿದಂತೆ ನಿರ್ಣಯಗಳನ್ನು ಬೇಗನೆ ತೆಗೆದುಕೊಳ್ಳುವುದು ಸಹ ಕಷ್ಟ. ಹಾಗೆಯೇ ನಿರ್ಧಾರ ಕ್ರಮದಲ್ಲಿ ಯಾವುದೇ ಮುಖ್ಯವಾದ ತಪ್ಪು ಉಂಟಾದರೂ ಇಡೀ ಕೈಗಾರಿಕೆಗೇ ನಷ್ಟ ತಗಲುವ ಸಂದರ್ಭಗಳಿರುತ್ತವೆ. ಒಂದು ಪಕ್ಷ ಉತ್ಪಾದಿಸುತ್ತಿರುವ ವಸ್ತುವಿನ ವಿನ್ಯಾಸ ಮುಂತಾದವನ್ನು ಬದಲಿಸಬೇಕಾದರೂ ಹಿಡಿಯುವ ಕಾಲಬಹಳ. ಏಕಮಾಲೀಕ ಉದ್ಯಮದಲ್ಲಿ ಉತ್ಪಾದನೆ ನಡೆಸುವುದು, ತೀರ್ಮಾನ ತೆಗೆದುಕೊಳ್ಳುವುದು ಬಲು ಸುಲಭ. ಹಾಗೆಯೇ ಮಾಲಿಕನಿಗೆ ಉದ್ಯಮ ತನ್ನದೆಂಬ ಅಭಿಮಾನವಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಾನೆ. ಆದರೆ ಬೃಹತ್ಪ್ರಮಾಣದ ಕೈಗಾರಿಕೆಯಲ್ಲಿ ಉದ್ಯಮದ ಮೇಲ್ವಿಚಾರಕರ ಭಾವನೆಗಳೇ ಬೇರೆ. ಅನೇಕ ಸಂದರ್ಭಗಳಲ್ಲಿ ಉದ್ಯಮಕ್ಕೆ ನಷ್ಟ ಉಂಟಾಗಬಹುದು. ಬೃಹತ್ ಕೈಗಾರಿಕೆಯ ಮತ್ತೊಂದು ಅನಾನುಕೂಲತೆಯೆಂದರೆ ಒಂದು ಪಕ್ಷ ಕೈಗಾರಿಕೆಯನ್ನು ನವೀಕರಿಸಬೇಕಾದರೆ, ಸಾಕಷ್ಟು ಹಣ ಮತ್ತು ಕಾಲ ಬೇಕಾಗುತ್ತದೆ. 

	ಬೃಹತ್ಪ್ರಮಾಣದ ಕೈಗಾರಿಕೆ ಉತ್ಪಾದನೆ ಮತ್ತು ವಿರತಣೆಯ ಅಂಶಗಳಿಂದಾಗಿ ತನ್ನ ಉತ್ಪಾದನೆಗೆ ಮಿತಿಗಳನ್ನು ಎದುರಿಸಬೇಕಾಗುತ್ತದೆ. ಉತ್ಪಾದಿತ ವಸ್ತುವಿಗೆ ಎಷ್ಟು ಪ್ರಮಾಣದ ಮಾರುಕಟ್ಟೆ ಇದೆ, ಅದಕ್ಕೆ ಅನುಭೋಗಿಗಳಿಂದ ಯಾವ ಮಟ್ಟದ ಅಭಿರುಚಿ ಇದೆ ಎನ್ನುವ ಅಂಶಗಳು ಈ ದೃಷ್ಟಿಯಿಂದ ಮುಖ್ಯವಾಗುತ್ತವೆ. ಹಾಗಯೇ ಕೈಗಾರಿಕೆಯಲ್ಲಿ ಒಂದು ಘಟ್ಟದ ಬಳಿಕ ಸರಾಸರಿ ಉತ್ಪಾದನ ವೆಚ್ಚ ಹೆಚ್ಚಾಗುತ್ತ ಹೋಗುತ್ತದೆ. ಇದರಿಂದಾಗಿ ಲಾಭದ ಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಬೃಹತ್ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುವಾಗ ಕಚ್ಚಾ ಸರಕುಗಳನ್ನೂ ಬೃಹತ್ಪ್ರಮಾಣದಲ್ಲಿ ಕೊಳ್ಳ ಬೇಕಾಗುತ್ತದೆ. ಅವುಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ಅವುಗಳ ಬೆಲೆ ಸಹ ಏರುತ್ತದೆ. ಇದರಿಂದ ಉತ್ಪಾದನೆ ನಷ್ಟ ಹೆಚ್ಚಾಗಿ ಉತ್ಪಾದಿತ ವಸ್ತುಗಳ ಬೆಲೆಗಳು ಅಸಹಜವಾಗಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

	ಭಾರತದ ಒಟ್ಟು ಕೈಗಾರಿಕಾ ಉತ್ಪಾದನೆಯನ್ನು ಗಮನಿಸಿದರೆ ಅದರಲ್ಲಿ ಹೆಚ್ಚು ಭಾಗ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದಲೇ ಬರುತ್ತಿರುವುದು ವೇದ್ಯವಾಗುತ್ತದೆ. ಸಣ್ಣ ಪ್ರಮಾಣದ ಕೈಗಾರಿಕೆಗೆ ಅಲ್ಪ ಪ್ರಮಾಣದ ಬಂಡವಾಳ ಸಾಕಾಗುವುದು. ಕಾರ್ಮಿಕರ ತೊಂದರೆ ಅಷ್ಟು ಹೆಚ್ಚಾಗಿಲ್ಲದಿರುವುದು, ಕೈಗಾರಿಕೆಯ ಮೇಲ್ವಿಚಾರಣೆಯನ್ನು ನಡೆಸುವುದು ಸುಲಭವಾಗಿರುವುದು ಇದಕ್ಕೆ ಕಾರಣಗಳು. ಹೀಗಾಗಿ ಬೃಹತ್ಪ್ರಮಾಣದ ಉತ್ಪಾದನೆ ಇಂದಿಗೂ ಕೇವಲ ಕೈಗಾರಿಕಾ ಪ್ರಧಾನ ರಾಷ್ಟ್ರಗಳಲ್ಲಿ ಮಾತ್ರ ಮುಂದುವರಿದಿರುವುದು.     (ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ